ರಯಲೋ ಶಿಲಾಸ್ತೋಮ - 	 ಭಾರತದ ರಾಜಸ್ತಾನದ ರಯಲೋ ಎಂಬ ಸ್ಥಳದ ಸುತ್ತಮುತ್ತ ಕಂಡುಬಂದಿರುವ ಶಿಲಾಸ್ತೋಮ. ಇದು 3000-2600 ದಶ ಲಕ್ಷ ವರ್ಷಗಳಷ್ಟು ಪ್ರಾಚೀನವಾದ್ದು. ವಿಂಧ್ಯಪೂರ್ವ ಶಿಲಾಸಮುದಾಯಕ್ಕೆ ಸೇರಿರುವ ಈ ಶೀಲಾಸ್ತೋಮ ವಿಂಧ್ಯ ಶಿಲಾಸಮುದಾಯದ ರೇವಶಿಲಾಸ್ತೋಮಕ್ಕಿಂತಲೂ ಪ್ರಾಚೀನವಾದ್ದು. ಇದನ್ನು ಮಕ್ರಾನ ಶಿಲಾಸ್ತೋಮ ಎಂದೂ ಕರೆಯುವುದಿದೆ. 
 
ಈ ಶಿಲಾಸ್ತೋಮ ಆರಾವಳಿ ಶಿಲೆಗಳ ಮೇಲ್ಭಾಗದಲ್ಲಿದ್ದು ಡೆಲ್ಲಿ ಶಿಲಾಸ್ತೋಮದಿಂದ ಆವೃತವಾಗಿದೆ. ಈ ಶಿಲಾಸ್ತರಗಳನ್ನು ಕೆಳಗಣ ಮತ್ತು ಮೇಲಣ ರಯಲೋಸ್ತರಗಳು ಎಂಬುದಾಗಿ ವಿಂಗಡಿಸಲಾಗಿದ್ದು ಇವುಗಳ ಸಂಪರ್ಕ ಅನಾನುರೂಪ್ಯತೆಯಿದಿಂದ (ಅನ್‍ಕನ್‍ಫಾರ್ಮಿಟಿ) ಕೂಡಿದೆ.
 
ರಯಲೋ ಶಿಲಾಸ್ತೋಮ ಬಹುತೇಕ ಸುಣ್ಣಶಿಲೆಯಾಗಿದ್ದು (600 ಮೀಟರ್ ಮಂದ). ಕೆಳಸ್ತರಗಳಲ್ಲಿ ಮರಳುಶಿಲೆ ಮತ್ತು ಮಿಶ್ರಶಿಲೆಗಳು ಇರುವುದು ಕಂಡು ಬಂದಿದೆ. ಸುಣ್ಣಶಿಲೆಗಳು ಹಿಂದಿನ ಶಿಲಾಸ್ತರಗಳ ಮೇಲೆ ರೂಪುಗೊಂಡಿದ್ದು ಮಧ್ಯ ಸ್ತರಗಳಲ್ಲಿ ಮರಳುಶಿಲೆಗಳು ಕಂಡುಬರುವುದಿಲ್ಲ. ಮೇವಾಡದ ರಾಜಸಮಂಡಿಯ ಸಮೀಪ ಇರುವ ಈ ಸ್ತರಗಳ ಮೇಲಿರುವ ಹಾಗೂ ಅಭ್ರಕಯುಕ್ತ ಮರಳು ಶಿಲೆಗಳು, ಪಟ್ಟಿಶಿಲೆಗಳಾಗಿ (ನೈಸ್) ರೂಪಾಂತರಗೊಂಡಿವೆ.
 
ರಯಲೋ ಸುತ್ತಮುತ್ತಲಿನ ಆಳ್ವಾರ್-ಜೈಪುರದ ಸಮೀಪ ಈ ಶಿಲಾಸ್ತೋಮ ಬೋಗುಣಿಯಾಕಾರದಲ್ಲಿ ಕಾಣಿಸಿಕೊಂಡು ಮಡಿಕೆಬಿದ್ದು (ಸಿನ್‍ಕ್ಲೈನ್), ಅನೇಕ ಶೇಖರಣೋತ್ತರ ವಿನ್ಯಾಸಗಳನ್ನು ಪ್ರದರ್ಶಿಸುತ್ತದೆ. ಮಕ್ರಾನ್, ರಸ್ ಮತ್ತು ಗದ್ವಾರ್ ಪ್ರದೇಶಗಳಲ್ಲಿ ಸಹ ಈ ಶೇಖರಣೋತ್ತರ ವಿನ್ಯಾಸಗಳನ್ನು ಕಾಣಬಹುದು. ರಯಲೋ ಶಿಲಾಸ್ತರಗಳ ಲಕ್ಷಣವನ್ನೇ ಹೋಲುವ ಮತ್ತೊಂದು ಪ್ರದೇಶ ಆಳ್ವರ್ ಎಂಬ ಸ್ಥಳ ಸಮೀಪದಲ್ಲಿಯ ಗ್ರಾನೈಟ್ ಶಿಲೆಗಳ ಮೇಲೆ ರೂಪುಗೊಂಡಿದ್ದು ಅಭ್ರಕಯುಕ್ತ ಮರಳುಶಿಲೆ ಮತ್ತು ಹರಳುರೂಪದ ಅಮೃತಶಿಲೆಗಳಾಗಿ ರೂಪಾಂತರಗೊಂಡಿದೆ. ಇದಲ್ಲದೆ ಉತ್ತರ-ಪಶ್ಚ್ಚಿಮ, ದಕ್ಷಿಣ ಪೂರ್ವಾಭಿಮುಖವಾಗಿ ಹರಡಿಕೊಂಡಿರುವ ಗುಡ್ಡಪ್ರದೇಶದಲ್ಲಿ ರಯಲೋ ಶಿಲಾಸ್ತರಗಳು ಶೇಖರಗೊಂಡಿವೆ. ಇದರಿಂದಾಗಿ ಈ ಶೇಖರಣೆ `ಮಕ್ರಾನ ಅಮೃತಶಿಲೆ ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ.
 
ಮಕ್ರಾನದ ದಕ್ಷಿಣ-ಪೂರ್ವಕ್ಕೆ ಸು.80 ಕಿಮೀ ಉದ್ದ, ಸು. 1.6 ಕಿಮೀ ಅಗಲವುಳ್ಳ ರಯಲೋ ಅಮೃತಶಿಲಾ ನಿಕ್ಷೇಪ ಕಂಡುಬರುತ್ತದೆ. ಇದರ ಖನಿಜ ಸಂಯೋಜನೆಯಲ್ಲಿ ಸುಣ್ಣಕಲ್ಲು, ಕ್ಯಾಲ್ಕ್‍ನೈಸ್ ಮತ್ತು ಹರಳುರೂಪದ ಅಮೃತ ಶಿಲಾ ವೈವಿಧ್ಯಗಳು ಹಾಸುಹೊಕ್ಕಾಗಿ ಸೇರಿಕೊಂಡಿವೆ.

ರಯಲೋ ಶಿಲಾಸ್ತರಗಳ ಪ್ರರೂಪ ಪ್ರದೇಶ ರಯಲೋ, ಮಕ್ರಾನಗಳಲ್ಲದೆ, ಜೋದಪುರ, ಗರದ್ವಾರಾ, ಉದಯಪುರ, ನಾಥ್‍ವಾಡಾ, ರಾಜಸಮಂಡಿ ಮತ್ತು ಕಂಕ್ರೋಲಿ ಪ್ರದೇಶಗಳಲ್ಲೂ ಕಂಡುಬಂದು ಅಮೃತಶಿಲೆಗಳ ರೂಪದಲ್ಲಿ ಮಿಶ್ರ ಶಿಲೆಗಳ ಮೇಲೆ ಶೇಖರಣೆಗೊಂಡಿವೆ. ರಯಲೋ ಶಿಲಾಸ್ತೋಮಕ್ಕೆ ಸೇರಿದ ಭಗವಾನ್‍ಪುರ ಸುಣ್ಣಶಿಲೆಗಳ ಮೇವಾಡದ ಸಮೀಪದಲ್ಲಿ ಕಾಣಿಸಿಕೊಂಡಿದೆ. ಇವು 30 ಮೀಟರಿನಷ್ಟು ಮಂದವಾಗಿವೆ. ರಯಲೋ ಶಿಲೆಗಳು ಅನಂತರ ಕಾಲದ ಗ್ರಾನೈಟ್‍ಶಿಲೆಗಳ ಜೊತೆಯಾಗಿ ಕಂಡುಬಂದರೂ ಅವನ್ನು ಪ್ರತ್ಯೇಕವಾಗಿ ಭೇದಿಸಿಲ್ಲ. ಮೂಲ ಸುಣ್ಣಶಿಲೆಗಳು ಅಮೃತಶಿಲೆಯಾಗಿ ರೂಪಾಂತರಗೊಳ್ಳದೆ ಹಾಗೇ ಉಳಿದುಕೊಂಡಿದೆ. ಜೀವವಿಕಾಸದ ಪ್ರಾರಂಭದ ಹಂತವನ್ನು ಸೂಚಿಸುವ ಶೈವಲರೂಪದ (ಆಲ್ಗೆ) ಸ್ಟ್ರೊಮೇಟೊಲೈಟ್ ಎಂಬ ಜೀವ್ಯವಶೇಷಗಳು ಚಿತ್ತೂರಿನ ಸುತ್ತಮುತ್ತ ಇರುವ ಸುಣ್ಣಶಿಲೆಗಳಲ್ಲಿ ವಿಶೇಷವಾಗಿ ಕಾಣಸಿಗುತ್ತವೆ.
 
ರಯಲೋ ಶಿಲಾಸ್ತೋಮಸ್ತರಗಳಲ್ಲಿ ಕೆಲವು ಖನಿಜಗಳೂ ರತ್ನಗಳೂ ರೂಪುಗೊಂಡಿವೆ. ಇವುಗಳಲ್ಲಿ ಮುಖ್ಯವಾಗಿ ಅಭ್ರಕ, ಸುಣ್ಣಶಿಲೆ, ಅಮೃತಶಿಲೆ ಮತ್ತು ಅರ್ಧರತ್ನಗಳು. ರಯಲೋ ಶಿಲಾಸ್ತೋಮದ ಕೆಳಗಿನ ಮಿಶ್ರಶಿಲಾಸ್ತರಗಳ ಶಿಥಿಲೀಕರಣದಿಂದ ವಜ್ರದ ತುಣುಕುಗಳು ಬಿಡುಗಡೆಯಾಗಿ ಮರಳಿನಲ್ಲೋ ಮಣ್ಣಿನಲ್ಲೋ ಕೂಡಿಕೊಂಡಿರುವುದು ಕಾಣಸಿಗುತ್ತವೆ. ಸುಣ್ಣಶಿಲೆಯನ್ನು ಸಿಮೆಂಟ್ ಉತ್ಪಾದನೆಗೂ ಮರಳುಶಿಲೆಯನ್ನು ಕಟ್ಟಡ ಕಲ್ಲುಗಳನ್ನಾಗಿಯೂ ಬಳಸುತ್ತಾರೆ.
(ಎಸ್.ಎಸ್.ಎ.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ